ಎಕ್ಕ
	ಆಸ್‍ಕ್ಲೆ ಕುಟುಂಬಕ್ಕೆ ಸೇರಿದ ಆರು ಪ್ರಭೇದಗಳನ್ನೊಳಗೊಂಡ ಸಸ್ಯಜಾತಿ. ಇಂಗ್ಲಿಷಿನಲ್ಲಿ ಕ್ಯಾಲೊಟ್ರೋಪಿಸ್ ಎಂದು ಕರೆಯಲಾಗುವ ಈ ಜಾತಿಯ ಗಿಡಗಳು ಆಫ್ರಿಕ ಮತ್ತು ಏಷ್ಯ ಖಂಡಗಳ ಉಷ್ಣವಲಯಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತವೆ. ಭಾರತದಲ್ಲಿ ಇದರ ಮೂರು ಪ್ರಭೇದಗಳು ಕಂಡುಬರುತ್ತವೆ. ಅವುಗಳಲ್ಲಿ ಮುಖ್ಯವಾದವು. ಎರಡು-ಕ್ಯಾಲೊಟ್ರೋಪಿಸ್ ಜೈಗ್ಯಾಂಷಿಯ ಮತ್ತು ಕ್ಯಾಲೊಟ್ರೋಪಿಸ್ ಪ್ರೊಸೆರ.

	ಈ ಗಿಡದ ಹೂ (ಅರ್ಕ) ಶಿವ ಮತ್ತು ಗಣೇಶನ ಪೂಜೆಗೆ ಶ್ರೇಷ್ಠವೆನ್ನುವ ನಂಬಿಕೆ ಇದೆ. ದೇವಸ್ಥಾನಗಳ ಆವರಣದಲ್ಲಿ ಇದನ್ನು ಬೆಳೆಸುತ್ತಾರೆ. ಮನೆಯ ಅವರಣಗಳಲ್ಲೂ ಇದನ್ನು ಬೆಳೆಸಿದರೆ ಒಳ್ಳೆಯದು ಎಂಬ ಭಾವನೆಯಿದೆ. ಬೆಳೆಸಬಾರದು, ಬೆಳೆಸಿದರೆ ಅಶುಭ ಎಂಬ ನಂಬಿಕೆಯೂ ಇದೆ. ಅಲ್ಲದೆ ಈ ಗಿಡವನ್ನೇ ಪೂಜಿಸುವುದೂ ರೂಢಿಯಲ್ಲಿದೆ. ಎಲೆ, ಬೇರು ಇತ್ಯಾದಿ ಭಾಗಗಳನ್ನು ಆಯುರ್ವೇದೀಯ ಔಷಧಪದ್ಧತಿಯಲ್ಲಿ ಉಪಯೋಗಿಸುತ್ತಾರೆ.

	ಗಿಡ ದೊಡ್ಡ ಪೊದೆಯಾಗಿ ಅಥವಾ ಸಣ್ಣಮರವಾಗಿ ಎರಡೂವರೆಯಿಂದ ಮೂರು ಮೀಟರಿನ ಎತ್ತರಕ್ಕೆ ಬೆಳೆಯುತ್ತದೆ. ನೆಲದಮಟ್ಟಕ್ಕೆ ಇರುವ ಕಾಂಡದಿಂದ ಹಲವಾರು ಶಾಖೆಗಳು ಹೊರಟು ಸುಮಾರು ಒಂದೇ ಎತ್ತರಕ್ಕೆ ಬೆಳೆದು ಗಿಡ ಪೊದರಿನಂತೆ ಕಾಣುತ್ತದೆ. ಸಸ್ಯದ ಎಲ್ಲ ಭಾಗಗಳಲ್ಲೂ ಬಿಳಿಯಬಣ್ಣದ ಹಾಲು (ಲ್ಯಾಟೆಕ್ಸ್) ಇರುವುದು ಈ ಗಿಡದ ಮುಖ್ಯ ಲಕ್ಷಣ. ಗಿಡದ ಎಳೆಯ ಭಾಗಗಳು ಮತ್ತು ಎಲೆಗಳ ಬೆನ್ನು ಭಾಗ ಒಂದು ಬಗೆಯ ನವುರಾದ ಬಿಳಿಯಬಣ್ಣದ ಅರಳೆಯಂಥ ತುಪ್ಪಳದಿಂದ ಆವೃತವಾಗಿರುತ್ತವೆ. ಎಲೆಗಳು ಅಭಿಮುಖಜೋಡಣೆ ಹೊಂದಿದ್ದು ದೀರ್ಘ ಅಂಡಾಕಾರವಾಗಿ, ಕೊಂಚ ದಪ್ಪನಾಗಿರುತ್ತವೆ. ಅವುಗಳಿಗೆ ತೊಟ್ಟುಗಳಿಲ್ಲ. ಇದ್ದರೂ ತುಂಬ ಪುಟ್ಟನಾಗಿರುತ್ತವೆ. ಕೆಲವೊಮ್ಮೆ ಎಲೆಗಳ ಬುಡ ಕಾಂಡವನ್ನು ಸುತ್ತುವರಿದಿರುತ್ತವೆ. ಹೂಗಳು ಸೈಮೋಸ್ ರೀತಿಯ ಗೊಂಚಲುಗಳಲ್ಲಿದ್ದು, ನಸು ನೀಲಿ ಅಥವಾ ಬಿಳಿಯ ಬಣ್ಣದ್ದಾಗಿರುತ್ತವೆ. ಹೂತೊಟ್ಟಿನ ಮೇಲೂ ಬಿಳಿಯ ಬಣ್ಣದ ಸಣ್ಣಕೂದಲುಗಳಿರುತ್ತವೆ. ಪುಷ್ಪದಳಗಳು ಸಂಯುಕ್ತವಾಗಿದ್ದು ಪೂರ್ಣವಾಗಿ ಅರಳಿದ ಹೂವಿನಲ್ಲಿ ಕೊಂಚ ಹಿಂದಕ್ಕೆ ಬಾಗಿಕೊಂಡಿರುತ್ತವೆ. ಹೂವಿನ ಕೇಂದ್ರಭಾಗದಲ್ಲಿ ಐದು ಕೇಸರಗಳಿಂದ ರಚಿತವಾದ ಒಂದು ಪುಷ್ಪಮಕುಟವಿರುತ್ತವೆ. ಕೇಸರ ದಂಡಗಳೆಲ್ಲ ಕೂಡಿಕೊಂಡು ಒಂದು ಕೊಳವೆಯಂತಾಗಿ, ಅದರ ಹೊರಭಾಗದಿಂದ ಐದು ದಪ್ಪನಾದ ಹಾಲೆ (ಲೋಬ್ಸ್) ಗಳಿರುತ್ತವೆ. ಕೇಸರದ ಪರಾಗಕೋಶಭಾಗ ಐದು ಮೂಲೆಗಳನ್ನು ಹೊಂದಿದ್ದು ಮಕುಟದ ಅಗ್ರಭಾಗವಾಗಿದೆ. ಈ ಮಕುಟದ ಕೊಳವೆಯೊಳಗಿಂದ ಶಲಾಕೆ ಹೊರಡುತ್ತದೆ. ಶಲಾಕಾಗ್ರ ಮಕುಟದ ಅಗ್ರಭಾಗದೊಡನೆ ಸೇರಿಕೊಂಡಿರುತ್ತದೆ. ಅಂಡಾಶಯ ಎರಡು ಕಾರ್ಪೆಲ್‍ಗಳಿಂದ ಕೂಡಿದ್ದು ಅವು ಬುಡದಲ್ಲಿ ಬಿಡಿಬಿಡಿಯಾಗಿರುತ್ತವೆ. ಕಾಯಿ ಫಾಲಿಕಲ್ ಬಗೆಯವಾಗಿದ್ದು ಅದರೊಳಗೆ ನೂರಾರು ಸಣ್ಣ ಸಣ್ಣ ಬೀಜಗಳಿರುತ್ತವೆ. ಬೀಜಗಳ ಸುತ್ತ ಹತ್ತಿಯಲ್ಲಿರುವಂತೆ ಬಿಳಿಯ ಕೂದಲುಗಳಿರುತ್ತವೆ. ಇವು ಬೀಜಪ್ರಸರಣ ಕ್ರಿಯೆಗೆ ಅನುವಾಗುತ್ತವೆ.

	ಎಕ್ಕದ ಹಾಲನ್ನು ಚರ್ಮ ಹದಮಾಡುವಾಗ ವಾಸನೆ ಮತ್ತು ಕೂದಲು ತೆಗೆದುಹಾಕಲು, ಚರ್ಮಕ್ಕೆ ಹಳದಿ ಬಣ್ಣಬರುವಂತೆ ಮಾಡಲು ಕೊಂಚಮಟ್ಟಿಗೆ ಉಪಯೋಗಿಸುತ್ತಾರೆ. ಇದನ್ನು ಎಲೆಕಳ್ಳಿಯ ರಸದೊಂದಿಗೆ ತೀವ್ರವಿರೇಚಕವಾಗಿ ಉಪಯೋಗಿಸುತ್ತಾರೆ. ಎಲೆಗಳನ್ನು ಟಿಂಕ್ಚರ್ ರೂಪದಲ್ಲಿ ಬಿಟ್ಟುಬಿಟ್ಟುಬರುವ ಜ್ವರದ ನಿವಾರಣೆಗೆ ಬಳಸುತ್ತಾರೆ. ಹೂವಿನ ಪುಡಿಯನ್ನು ಶೀತ, ಕೆಮ್ಮು, ಗೂರಲು ಮತ್ತು ಅಜೀರ್ಣ ದೋಷಗಳಲ್ಲಿ ಉಪಯೋಗಿಸುತ್ತಾರೆ. ಬೇರಿನ ತೊಗಟೆಯನ್ನು ಪುಡಿಮಾಡಿ ಆಮಶಂಕೆ ನಿವಾರಣೆಗೆ ಉಪಯೋಗಿಸುತ್ತಾರೆ. ಅಲ್ಲದೆ ಇದು ಲಘು ಪ್ರಮಾಣದಲ್ಲಿ ಕಫಹಾರಿ ಮತ್ತು ಸ್ವೇದಕಾರಿ. ಇದನ್ನು ಸರಿಯ ರೂಪದಲ್ಲಿ, ಆನೆಕಾಲು ರೋಗಿಗಳ ಚರ್ಮಕ್ಕೆ ಲೇಪಿಸುತ್ತಾರೆ.

	ತೊಗಟೆಯಿಂದ ಒಂದು ಬಗೆಯ ಬಿಳಿಯ ರೇಷ್ಮೆಯಂಥ, ಬಹುಕಾಲ ಬಾಳಿಕೆ ಬರುವ ನಾರು ದೊರಕುತ್ತದೆ. ಇದು ಕರ್ಷಕ (ಟೆನ್ಸೈಲ್) ಬಲದಲ್ಲಿ ಹತ್ತಿಗಿಂತ ಉತ್ತಮವಾಗಿದ್ದು ಬಿಲ್ಲಿನ ಹೆದೆ, ಮೀನಿನ ಬಲೆ ಮತ್ತು ಟ್ವೈನ್‍ದಾರ ಮಾಡಲು ಬರುತ್ತದೆ. ಆದರೆ ಇದನ್ನು ಗಿಡದಿಂದ ಹೊರತೆಗೆಯುವುದು ಪ್ರಯಾಸದ ಕೆಲಸ. 

	ಬೀಜದ ಮೇಲೆ ಇರುವ ಮೃದುವಾದ, ಹೊಳಪುಳ್ಳ ಕೂದಲನ್ನು ಹಾಸಿಗೆ ದಿಂಬುಗಳಿಗೆ ಹೂರಣವಾಗಿ ತುಂಬಲು ಉಪಯೋಗಿಸುತ್ತಾರೆ.										
(ಕೆ.ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ